"ಜನರು ಪ್ರತಿದಿನದ ಜೀವನದಲ್ಲಿಯೂ ಸರಕಾರದ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುತ್ತಾರೆ." - ಡಾ. ಡಿ.ವಿ.ಗುಂಡಪ್ಪ (ಕೃತಿ: ರಾಜ್ಯಶಾಸ್ತ್ರ) * "ಅನ್ಯಾಯಗಳ ವಿರುದ್ಧ ಕೆಚ್ಚೆದೆಯಿಂದ ನಿಲ್ಲು. ಎಂತಹ ಪರಿಸ್ಥಿತಿಗೂ ಸಿದ್ಧನಾಗಿರು." -ಡಾ.ಡಿ.ವಿ.ಗುಂಡಪ್ಪ, (ಮಂಕುತಿಮ್ಮನ ಕಗ್ಗ-258)

ಪ್ರತಿನಿತ್ಯ ಊಟಕ್ಕೆ ಕುಳಿತಾಗ ಅನ್ನ ತಿನ್ನುವ ಮೊದಲು ನಿನ್ನನ್ನು ನೀನು ಕೇಳಿಕೋ- "ಇದನ್ನು ಬೇಯಿಸಿದ ನೀರು ನಿನ್ನ ಪರಿಶ್ರಮದ ಬೆವರೋ? ಅಥವಾ ಇನ್ನೊಬ್ಬರ ಕಣ್ಣೀರೋ?"-ಡಾ.ಡಿ.ವಿ.ಗುಂಡಪ್ಪ, ಕೃತಿ: ಮಂಕುತಿಮ್ಮನ ಕಗ್ಗ

Saturday, August 31, 2024

Devarayanadurga Temple Accounts- RTI - 2024 - ದೇವರಾಯನದುರ್ಗ ದೇವಾಲಯ ಲೆಕ್ಕಪತ್ರ





















ದೇವರಾಯನದುರ್ಗ ದೇವಾಲಯ: 2023-24 ರಲ್ಲಿ

2.54 ಕೋಟಿ ಆದಾಯ, ಹುಂಡಿಯಲ್ಲೇ 1.09 ಕೋಟಿ ಸಂಗ್ರಹ

ತುಮಕೂರು

ತುಮಕೂರು ಸಮೀಪದ ಸುಪ್ರಸಿದ್ಧ ಯಾತ್ರಾಸ್ಥಳವಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿವಿಧ ಮೂಲಗಳಿಂದ 2023-24 ನೇ ಸಾಲಿನಲ್ಲಿ ಒಟ್ಟು  ರೂ. 2,54,57,380 ಆದಾಯ ಸಂದಾಯವಾಗಿದೆ. ಇದರಲ್ಲಿ ಆ ಸಾಲಿನಲ್ಲಿ  ಹುಂಡಿಯೊಂದರಿಂದಲೇ ಒಟ್ಟು ರೂ. 1,09,79,254 ಸಂಗ್ರಹವಾಗಿದೆ.

ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.  

ಹರಿದುಬಂದ ಆದಾಯ

ಈ ದೇವಾಲಯವನ್ನು ಧಾರ್ಮಿಕದತ್ತಿ ಇಲಾಖೆಯು ‘ಎ’ ಶ್ರೇಣಿಯ ದೇವಾಲಯವೆಂದು ಗುರುತಿಸಿದೆ. 2023-24 ನೇ ಸಾಲಿನಲ್ಲಿ ಒಟ್ಟು 21 ಬಾಬ್ತುಗಳಿಂದ ದೇವಾಲಯಕ್ಕೆ ಹಣ ಸಂದಾಯವಾಗಿದೆ. ಮೇಲಿನ ಬೆಟ್ಟದಲ್ಲಿರುವ ಶ್ರೀ ಯೋಗಾಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿ ರೂ. 31,30,737 ಸಂಗ್ರಹವಾಗಿದ್ದರೆ, ಕೆಳಗಿನ ಬೆಟ್ಟದಲ್ಲಿರುವ ಶ್ರೀ ಭೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿ ರೂ. 78,48,517 ರೂ. ಸಂಗ್ರಹಗೊಂಡಿದೆ. ಹೀಗೆ ಹುಂಡಿಯೊಂದರಲ್ಲೇ ಒಟ್ಟು ರೂ. 1,09,79,254 ಸಂಗ್ರಹವಾಗಿದೆ. ಸೇವಾರ್ಥ ಕಾಣಿಕೆಗಳು, ಇತರೆ ಸೇವೆಗಳ ಮೂಲಕ  ರೂ. 46,85,851, ಕಾಣಿಕೆ ರೂಪದಲ್ಲಿ ಬಂದ ಒಟ್ಟು ಹಣ ರೂ. 21,05,554, ಆನ್ ಲೈನ್ ಮುಖಾಂತರ ಬಂದ ಮೊತ್ತ ರೂ. 4,82,708, ಶಾಶ್ವತ ಸೇವೆಯಲ್ಲಿ ತೊಡಗಿಸಿದ ಹಣಕ್ಕೆ ಬಂದ ಬಡ್ಡಿ ರೂ. 16,34,394, ವಿಶೇಷ ದರ್ಶನ ವ್ಯವಸ್ಥೆಯಿಂದ   ರೂ. 3,19,200, ಯಾತ್ರಿ ನಿವಾಸ ಕಟ್ಟಡದ ಬಾಡಿಗೆಯಿಂದ ರೂ. 3,54,500, ದೇವರ ಶೇಷವಸ್ತ್ರಗಳ ಮಾರಾಟದಿಂದ ರೂ. 3,46,780, ಕರಿಗಿರಿ ವಸತಿಗೃಹಗಳ ಬಾಡಿಗೆಯಿಂದ ರೂ. 3,20,200, ಮತ್ತೊಂದು ಹುಂಡಿಯಿಂದ ರೂ. 3,80,189, ಕಲ್ಯಾಣಮಂದಿರದಿಂದ ಬಂದ ಬಾಡಿಗೆ ರೂ. 2,31,450, ಎಸ್.ಬಿ.ಖಾತೆಯಿಂದ ಬಂದ ಬಡ್ಡಿ ಹಣ ರೂ. 1,61,943, ಚಪ್ಪಲಿ ಸ್ಟಾಂಡ್ ಹರಾಜಿನಿಂದ ರೂ. 1,19,000 ಸಂದಾಯವಾಗಿದೆ ಎಂದು ಒಟ್ಟು 21 ಬಾಬ್ತುಗಳ ಪಟ್ಟಿಯನ್ನು  ಸದರಿ ಅಧಿಕಾರಿ ನೀಡಿದ್ದಾರೆ.

ಏರಿಕೆಗೊಂಡ ಆದಾಯ

ಆರ್.ವಿಶ್ವನಾಥನ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿಗಳು, ದೇವಾಲಯದ  ಆದಾಯವು 2015 ನೇ ಸಾಲಿನಿಂದ ಪ್ರತಿವರ್ಷ ಏರುತ್ತಾ ಹೋಗಿರುವ ವಿವರ ನೀಡಿದ್ದಾರೆ. 2015-16 ನೇ ಸಾಲಿನಲ್ಲಿ ರೂ.1.41 ಕೋಟಿ, 2016-17 ರಲ್ಲಿ ರೂ. 1.46 ಕೋಟಿ, 2017-18 ರಲ್ಲಿ ರೂ. 1.54 ಕೋಟಿ, 2018-19 ರಲ್ಲಿ ರೂ. 1.40 ಕೋಟಿ, 2019-20 ರಲ್ಲಿ ರೂ. 1.52 ಕೋಟಿ, 2020-21 ರಲ್ಲಿ ರೂ. 1,47 ಕೋಟಿ, 2021-22 ರಲ್ಲಿ ರೂ. 1.68 ಕೋಟಿ, 2022-23 ರಲ್ಲಿ ರೂ. 2.41 ಕೋಟಿ, 2023-24 ರಲ್ಲಿ ರೂ. 2.54 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ.

ವೆಚ್ಚದ ವಿವರ

2023-24 ನೇ ಸಾಲಿನಲ್ಲಿ ಆಗಿರುವ ವೆಚ್ಚದ ವಿವರವನ್ನೂ ದೇವಾಲಯದ ಅಧಿಕಾರಿಗಳು ಇನ್ನೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಮಾಹಿತಿಯ ಪಟ್ಟಿ ಒದಗಿಸಿದ್ದಾರೆ. ಆ ಪ್ರಕಾರ ಅಧಿಕಾರಿಗಳ ವೇತನಕ್ಕೆ ರೂ. 10 ಲಕ್ಷ, ನೌಕರರ ವೇತನಕ್ಕೆ ರೂ. 96 ಲಕ್ಷ, ಜಾತ್ರಾ ಬೋನಸ್ ಆಗಿ ರೂ. 6 ಲಕ್ಷ, ರಥೋತ್ಸವಕ್ಕೆ ರೂ. 4 ಲಕ್ಷ 90 ಸಾವಿರ, ದೇವಾಲಯದ ಹುಂಡಿ ಎಣಿಕೆಯ ವಿಡಿಯೋ ಚಿತ್ರೀಕರಣಕ್ಕೆ ರೂ. 47 ಸಾವಿರ, ಘನತ್ಯಾಜ್ಯ ನಿರ್ವಹಣೆ ಘಟಕವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸುವ ಕಾಮಗಾರಿಗೆ ರೂ. 13 ಲಕ್ಷ 56 ಸಾವಿರ, ದೇವಾಲಯದ ನೌಕರರಿಗೆ ಸೇವಾಂತ್ಯ ಮತ್ತು ನಿವೃತ್ತಿ ಸೌಲಭ್ಯಗಳಿಗಾಗಿ ರೂ. 70 ಸಾವಿರ, ದೇವಾಲಯದ ನೌಕರರ ಭವಿಷ್ಯನಿಧಿ ಸೌಲಭ್ಯಕ್ಕೆ ರೂ. 11 ಲಕ್ಷ 90 ಸಾವಿರ, ಆಹಾರ ಮತ್ತು ಸ್ವಚ್ಚತಾ ಸಾಮಗ್ರಿ ಖರೀದಿಗೆ ರೂ. 8 ಲಕ್ಷ 65 ಸಾವಿರ, ಗ್ಯಾಸ್ ಸಿಲಿಂಡರ್ ಖರೀದಿಗೆ ರೂ. 3 ಲಕ್ಷ 14 ಸಾವಿರ, ಅಡಿಗೆ ತಯಾರಿಸಿ ಬಡಿಸುವವರ ಗುತ್ತಿಗೆ ಮೊತ್ತ ರೂ. 8 ಲಕ್ಷ 25 ಸಾವಿರ, ನಿತ್ಯ ಅನ್ನ ಸಂತರ್ಪಣೆಯ ಮಜ್ಜಿಗೆ ತಯಾರಿಕೆಗಾಗಿ ಹಾಲು ಮತ್ತು ಮೊಸರು ಕೊಳ್ಳಲು ರೂ. 2 ಲಕ್ಷ 29 ಸಾವಿರ, ಊಟದ ಎಲೆ ಖರೀದಿಗೆ ರೂ. 4 ಲಕ್ಷ 76 ಸಾವಿರ, ಪ್ರಸಾದನಿಲಯ, ಕಾಟೇಜ್, ಕಲ್ಯಾಣಮಂಟಪ ಮತ್ತು ಪಂಪ್ ಸೆಟ್ಗಳ ವಿದ್ಯುತ್ ಬಿಲ್ಗಳ ಪಾವತಿಗೆ ರೂ.7 ಲಕ್ಷ 30 ಸಾವಿರ,  ಸೇವಾರ್ಥಗಳಿಗೆ ಉಪಯೋಗಿಸಲಾದ ದಿನಸಿಯ ವೆಚ್ಚ ರೂ. 8 ಲಕ್ಷ 34 ಸಾವಿರ ಎಂಬಿತ್ಯಾದಿಯಾಗಿ ವೆಚ್ಚದ ವಿವರದ ಪಟ್ಟಿಯನ್ನು ಒದಗಿಸಲಾಗಿದೆ.

ಇದೇ ಸಾಲಿನಲ್ಲಿ ಒಟ್ಟು  ಏಳು ದಾನಿಗಳಿಂದ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ವಿಶ್ವನಾಥನ್ ತಿಳಿಸಿದ್ದಾರೆ.

29 ಮಂದಿ ಸಿಬ್ಬಂದಿ

ದೇವಾಲಯದಲ್ಲಿ ಅರ್ಚಕರಿಂದ ಹಿಡಿದು ವಿವಿಧ ರೀತಿಯ ಕರ್ತವ್ಯ ನಿರ್ವಹಿಸುವ ಒಟ್ಟು 29 ಜನ ಸಿಬ್ಬಂದಿಗಳಿದ್ದಾರೆ. ಇವರಿಗೆ ನಿಗದಿತ ವೇತನ, ದ್ವಿತೀಯ ದರ್ಜೆ ಸಹಾಯಕರ ವೇತನ ಶ್ರೇಣಿ, ಗ್ರೂಪ್ ಡಿ ವೇತನ ಶ್ರೇಣಿ, ನಿಯಮ (8) ರಂತೆ ವೇತನ ಶ್ರೇಣಿ ನೀಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಅಧಕಾರಿಗಳು ತಿಳಿಸಿದ್ದು, ಮಾಹಿತಿಹಕ್ಕು ಕಾಯ್ದೆ ಪ್ರಕಾರ ವೇತನದ ಮೊತ್ತದ ವಿವರವನ್ನು ನೀಡದೆ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರ್.ವಿಶ್ವನಾಥನ್ ಆಕ್ಷೇಪಿಸಿದ್ದಾರೆ.

_________________________________________________________
















               


-------------------------------------------------------------------





 






 
                                              ************************************

ಪ್ರಥಮ ಮೇಲ್ಮನವಿ ಅರ್ಜಿ
------------------------------------------------------------------------------------------------------------
ಆರ್.ಟಿ.ಐ. ಅರ್ಜಿ

No comments:

Post a Comment