"ಜನರು ಪ್ರತಿದಿನದ ಜೀವನದಲ್ಲಿಯೂ ಸರಕಾರದ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುತ್ತಾರೆ." - ಡಾ. ಡಿ.ವಿ.ಗುಂಡಪ್ಪ (ಕೃತಿ: ರಾಜ್ಯಶಾಸ್ತ್ರ) * "ಅನ್ಯಾಯಗಳ ವಿರುದ್ಧ ಕೆಚ್ಚೆದೆಯಿಂದ ನಿಲ್ಲು. ಎಂತಹ ಪರಿಸ್ಥಿತಿಗೂ ಸಿದ್ಧನಾಗಿರು." -ಡಾ.ಡಿ.ವಿ.ಗುಂಡಪ್ಪ, (ಮಂಕುತಿಮ್ಮನ ಕಗ್ಗ-258)

ಪ್ರತಿನಿತ್ಯ ಊಟಕ್ಕೆ ಕುಳಿತಾಗ ಅನ್ನ ತಿನ್ನುವ ಮೊದಲು ನಿನ್ನನ್ನು ನೀನು ಕೇಳಿಕೋ- "ಇದನ್ನು ಬೇಯಿಸಿದ ನೀರು ನಿನ್ನ ಪರಿಶ್ರಮದ ಬೆವರೋ? ಅಥವಾ ಇನ್ನೊಬ್ಬರ ಕಣ್ಣೀರೋ?"-ಡಾ.ಡಿ.ವಿ.ಗುಂಡಪ್ಪ, ಕೃತಿ: ಮಂಕುತಿಮ್ಮನ ಕಗ್ಗ

Thursday, November 21, 2019

ತುಮಕೂರು ನಗರದಲ್ಲಿ ಫ್ಲೆಕ್ಸ್ ಹಾವಳಿ ಕುರಿತ ವಿಶೇಷ ಲೇಖನ





“ಸತ್ಯದರ್ಶಿನಿ”  ದಿನಪತ್ರಿಕೆಯಲ್ಲಿ ಇಂದು (ದಿನಾಂಕ 22-11-2019) ಪ್ರಕಟವಾಗಿರುವ ನನ್ನ ವಿಶೇಷ ಲೇಖನ.


ತುಮಕೂರು ನಗರದಲ್ಲಿ ಫ್ಲೆಕ್ಸ್ ಹಾವಳಿ
(ಆರ್.ವಿಶ್ವನಾಥನ್)
ತುಮಕೂರು
                ರಾಜ್ಯ ಸರ್ಕಾರವು ಫ್ಲೆಕ್ಸ್ ಅಳವಡಿಕೆ ನಿಷೇಧಿಸಿ ಮೂರು ವರ್ಷಗಳು ಕಳೆದರೂ, ಪರಿಸರ ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳು ದಿನವೂ ಆತಂಕವನ್ನು ಉಂಟುಮಾಡುತ್ತಿದ್ದರೂ, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾವಳಿ ಮಾತ್ರ ಅನಿಯಂತ್ರಿತವಾಗಿ ಮುಂದುವರೆದಿರುವುದು ಆತಂಕಕಾರಿ ಆಗಿದೆ.
ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯವು ದಿನಾಂಕ: ೧೧-೦೩-೨೦೧೬ ರಂದು ಅಧಿಸೂಚನೆ (ಸಂಖ್ಯೆ: ಅಪಜೀ/೧೭/ಇಪಿಸಿ/೨೦೧೨, ದಿನಾಂಕ: ೧೧-೦೩-೨೦೧೬) ಯನ್ನು ಹೊರಡಿಸಿ ನಿರ್ದಿಷ್ಟ ಪ್ಲಾಸ್ಟಿಕ್ ಉತ್ಪನ್ನಗಳ (ಕ್ಯಾರಿಬ್ಯಾಗ್ ಇತ್ಯಾದಿ) ಬಳಕೆ ಸೇರಿದಂತೆ ಫ್ಲೆಕ್ಸ್ ಅಳವಡಿಕೆಯನ್ನು ರಾಜ್ಯಾದ್ಯಂತ ಅನ್ವಯವಾಗುವಂತೆ ಕಡ್ಡಾಯವಾಗಿ ನಿಷೇಧಿಸಿರುವುದು ಸರಿಯಷ್ಟೇ. ಅಧಿಸೂಚನೆಯು ಅದೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರ'' (ಗೆಜೆಟ್, ಸಂಖ್ಯೆ ೩೭೩)ದಲ್ಲಿ ಅಧಿಕೃತವಾಗಿ ಪ್ರಕಟಗೊಂಡು ಅಂದಿನಿಂದಲೇ ಜಾರಿಗೂ ಬಂದಿದೆ.
                ಫ್ಲೆಕ್ಸ್ ನಿಷೇಧದ ಅಧಿಸೂಚನೆಯು ಅಂದಿನಿಂದ ಇಂದಿನವರೆಗೆ ಅರ್ಥಾತ್ ಕಳೆದ ಮೂರು ವರ್ಷದ ಅವಧಿಯಲ್ಲಿ ತುಮಕೂರು ನಗರದಲ್ಲಿ ಅಂದರೆ ತುಮಕೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಎಷ್ಟರ ಮಟ್ಟಿಗೆ ಜಾರಿಗೆ ಬಂದಿದೆ ಎಂಬುದು ಚರ್ಚಾರ್ಹವಾಗಿದೆ ಹಾಗೂ ಪ್ರಶ್ನಾರ್ಹವಾಗಿದೆ.
                ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಂದು ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯಾದಂತ ನಿರ್ದಿಷ್ಟ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿತು. ಅದರಲ್ಲಿ ಫ್ಲೆಕ್ಸ್ ಅಳವಡಿಕೆಯನ್ನೂ ನಿಷೇಧಿಸಿರುವುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಇತ್ತೀಚೆಗೆ ಗಾಂಧಿ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ದೇಶಾದ್ಯಂತ ಪ್ಲಾಸ್ಟಿಕ್ ಮುಕ್ತ ವಾತಾವರಣಕ್ಕೆ ಕರೆ ನೀಡಿದ್ದರು. ಆದರೂ ಇದು ಇನ್ನೂ ನಮ್ಮ ತುಮಕೂರು ನಗರದಲ್ಲಿ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.
                ತುಮಕೂರು ನಗರಾದ್ಯಂತ ಪ್ರಮುಖ ರಸ್ತೆಗಳಲ್ಲಿ ಹಾಗೂ ಇತರೆಡೆ ಮನಬಂದಂತೆ ಹಾಗೂ ಯದ್ವಾತದ್ವಾ ಫ್ಲೆಕ್ಸ್ಗಳನ್ನು ಹಾಕಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆಯಲ್ಲದೆ, ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಸಣ್ಣಪುಟ್ಟ ಫ್ಲೆಕ್ಸ್ಗಳಿಂದ ಹಿಡಿದು ಬೃಹತ್ ಗಾತ್ರದ ಫ್ಲೆಕ್ಸ್ಗಳನ್ನು ಅಳವಡಿಸುತ್ತಿರುವುದು ಅಕ್ರಮವಷ್ಟೇ ಅಲ್ಲದೆ ಸರ್ಕಾರದ ನಿಯಮವನ್ನು ಸಾರಾಸಗಟು ನಿರ್ಲಕ್ಷಿಸಿದಂತಾಗುತ್ತಿದೆ. ಸಮಾಜದಲ್ಲಿ ಅತ್ಯಂತ ಕೀಳು ಅಭಿರುಚಿಯ ಫ್ಲೆಕ್ಸ್ ಸಂಸ್ಕೃತಿ ಬೆಳೆಯುವಂತಾಗುತ್ತಿದೆ.
                ವಾಸ್ತವವಾಗಿ ಫ್ಲೆಕ್ಸ್ಗಳಿಗೆ ಮಹಾನಗರ ಪಾಲಿಕೆ ಅನುಮತಿಯನ್ನೇ ನೀಡುವುದಿಲ್ಲ. ಫ್ಲೆಕ್ಸ್ ಹಾಕುವುದೆಂದರೆ ಅದು ಅಕ್ರಮವೆಂದೇ ಅರ್ಥ. ಅಂದರೆ ನಿಯಮವನ್ನು ಧಿಕ್ಕರಿಸಿ, ಎಲ್ಲ ರಾಜಕೀಯ ಪಕ್ಷಗಳವರೂ, ಪ್ರಭಾವಿ ಸಂಘ ಸಂಸ್ಥೆಗಳವರೂ, ಪ್ರಭಾವಿ ವ್ಯಕ್ತಿಗಳೂ ಅವಿವೇಕದಿಂದ ಫ್ಲೆಕ್ಸ್ಗಳನ್ನು ಹಾಕುತ್ತಿದ್ದಾರೆ. ಮೂಲಕ ನಗರದ ಸೌಂದರ್ಯಕ್ಕೂ ಧಕ್ಕೆ ತರಲಾಗುತ್ತಿದೆ. ದುರಂತವೆಂದರೆ ಒಂದು ವೇಳೆ ಫ್ಲೆಕ್ಸ್ಗಳನ್ನು ಹಾಕದಂತೆ ಪಾಲಿಕೆ ಅಧಿಕಾರಿಗಳು ಆಕ್ಷೇಪಿಸಿದರೆ ಅಥವಾ ಹಾಕಲಾದ ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಹೋದರೆ ಸಂಬಂಧಿಸಿದ ಅಧಿಕಾರಿಗಳು ರಾಜಕೀಯ ನಾಯಕರ ಆಕ್ರೋಶಕ್ಕೆ ಬಲಿಯಾಗುತ್ತಿರುವುದನ್ನೂ ಗಮನಿಸಬಹುದಾಗಿದೆ.
                ಇತ್ತೀಚೆಗೆ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಅಕ್ರಮವಾಗಿ ಸಂಘಸಂಸ್ಥೆಗಳು ಬಂಟಿಂಗ್ಸ್ ಹಾಕಿತ್ತು. ಇವರ ಅತ್ಯುತ್ಸಾಹಕ್ಕೆ ಇಡೀ ವೃತ್ತವೇ ಕಾಣಿಸದಷ್ಟು ದಟ್ಟವಾಗಿ ಬಂಟಿಂಗ್ಸ್ ತುಂಬಿ ಹೋಗಿತ್ತು. ಕಾರ್ಯಕ್ರಮ ಮುಗಿದು ಹಲವು ದಿನಗಳಾದರೂ ಇದು ಹಾಗೆಯೇ ಉಳಿದಿತ್ತು. ಕೊನೆಗೆ ಅದನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಮುಂದಾಯಿತು. ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾಗಿ ಓರ್ವ ಪೌರಕಾರ್ಮಿಕ ಮೃತಪಟ್ಟ ದುರಂತ ಸಂಭವಿಸಿತು. ಅಮೂಲ್ಯವಾದ ಜೀವವೊಂದು ಕಳೆದುಹೋದುದಕ್ಕೆ ಯಾರು ಹೊಣೆ?
                ತುಮಕೂರು ಮಹಾನಗರ ಪಾಲಿಕೆಯು ಈಗ ಇದನ್ನು ಗಂಭೀರವಾಗಿ ಪರಿಗಣಿಸಿ, ಫ್ಲೆಕ್ಸ್ ಹಾವಳಿ ತಡೆಗಟ್ಟಲು ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯವಾಗಿ, ನಿರ್ಭೀತಿಯಿಂದ ಕಾರ್ಯನಿರ್ವಹಿಸಬೇಕು. ಅಂತಹ ಇಚ್ಛಾಶಕ್ತಿಯನ್ನು ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ವ್ಯಕ್ತಪಡಿಸಬೇಕು. ತುಮಕೂರು ನಗರದ ಶಾಸಕರು ಸಹ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಏಕೆಂದರೆ ತುಮಕೂರು ನಗರದ ಸೌಂದರ್ಯ ರಕ್ಷಣೆಗಾಗಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಇದು ಅನಿವಾರ್ಯವಾಗಿದೆ.